ಅರುಣಾಚಲಪ್ಪ
1899-1966. ಪ್ರಸಿದ್ಧ ಹಾರ್ಮೋನಿಯಂ ವಿದ್ವಾಂಸರು. ಬೆಂಗಳೂರಿನಲ್ಲಿ ಜನನ. ತಂದೆ ವೀರಭದ್ರಪ್ಪ, ತಾಯಿ ಗೌರಮ್ಮ. ಬೆಂಗಳೂರು ಅರಳೇಪೇಟೆಯಲ್ಲಿನ ಭಜನೆ ಮಂದಿರಗಳ ಸಂಪರ್ಕದಿಂದ ಬಾಲ್ಯದಲ್ಲೇ ಸಂಗೀತಕ್ಕೆ ಮನಸೋತ ಇವರು ನಾರಾಯಣಸ್ವಾಮಿ ಮತ್ತು ಪಿಟೀಲು ಪುಟ್ಟಪ್ಪನವರಲ್ಲಿ ಸಂಗೀತಾಭ್ಯಾಸ ಮಾಡಿದರು. ಹರಿಕಥೆ, ನಾಟಕ ಮತ್ತು ಭಜನೆ ಮಂಡಳಿಗಳಿಗೆ ಮಾತ್ರ ಮೀಸಲಾಗಿದ್ದ ಹಾರ್ಮೋನಿಯಂ ವಾದ್ಯವನ್ನು ಕರ್ಣಾಟಕ ಸಂಗೀತಕ್ಕೆ ಪಕ್ಕವಾದ್ಯವಾಗಿಯೂ ತನಿಯಾಗಿಯೂ ನುಡಿಸುವ ಸಾಮಥ್ರ್ಯವನ್ನು ಸಂಪಾದಿಸಿಕೊಂಡು ವೇದಿಕೆಗಳ ಮೇಲೆ ಯಶಸ್ಸುಗಳಿಸಿ ಹಾರ್ಮೋನಿಯಂ ಅರುಣಾಚಲಪ್ಪ ಎಂದು ಪ್ರಸಿದ್ಧರಾದರು. ಗಮಕವನ್ನು ನುಡಿಸಲು ಸಾಧ್ಯವಲ್ಲದ ಈ ವಾದ್ಯದಲ್ಲಿ ಅನುಸ್ವರಗಳ ಜೋಡಣೆ ಮತ್ತು ನಾದ ತುಂಬುವ ಚತುರತೆಯಿಂದ ಗಮಕದ ಛಾಯೆಗಳನ್ನೂ ತರುತ್ತಿದ್ದರು. ಇವರು ಪಿಟೀಲು ವಾದ್ಯವನ್ನು ಸಹ ನುಡಿಸುತ್ತಿದ್ದರು. ಇವರು ನುಡಿಸಿದ ಕೆಲವು ಹಾಡುಗಳು ಗ್ರಾಮಫೆÇೀನ್ ರಿಕಾರ್ಡ್ ಆಗಿವೆ. ವಿದ್ವಾನ್ ಬಿ.ಎಸ್.ರಾಜಯ್ಯಂಗಾರ್ಯರ ಜೊತೆಯಲ್ಲಿ ಭಾರತದ ಪ್ರವಾಸ ಮಾಡಿದರು. ಪಿಟೀಲು ವಿದ್ವಾನ್ ಟಿ.ಚೌಡಯ್ಯನವರೊಡನೆ ಅನೇಕ ಕಛೇರಿಗಳಲ್ಲಿ ಹಾರ್ಮೋನಿಯಂ ನುಡಿಸಿದ್ದಾರೆ. ಬೆಂಗಳೂರು ಬಳೇಪೇಟೆಯಲ್ಲಿ ಇವರು ಸ್ಥಾಪಿಸಿದ ಅರುಣಾ ಮ್ಯೂಸಿಕಲ್ಸ್ ಎಂಬ ಸಂಗೀತ ವಾದ್ಯಗಳ ಅಂಗಡಿ ಇಂದೂ ನಡೆದುಕೊಂಡು ಬರುತ್ತಿದೆ. ಅರುಣಾಚಲಪ್ಪನವರು ಹೃದಯಾ ಘಾತದಿಂದ 1966 ಫೆಬ್ರವರಿ 4ರಂದು ನಿಧನರಾದರು.  
  
(ಟಿ.ಎಸ್.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ